ಪೆನ್, ವಿಲಿಯಮ್
1644-1718 ಇಂಗ್ಲಿಷ್ ಕ್ವೇಕರ್ ಪಂಥದ ಅನುಯಾಯಿ, ಧಾರ್ಮಿಕ ಸಹಿಷ್ಣುತೆಯ ಪ್ರಚಾರಕ ಮತ್ತು ಅಮೆರಿಕದ ಪೆನ್‍ಸಿಲ್ವೇನಿಯಾ ಸಂಸ್ಥಾನದ ಸಂಸ್ಥಾಪಕ. ಹುಟ್ಟಿದ್ದು ಲಂಡನ್ನಿನ ಟವರ್‍ಹಿಲ್‍ನಲ್ಲಿ. ತಂದೆ ಸೈನ್ಯಾಧಿಕಾರಿ ಸರ್ ವಿಲಿಯಮ್‍ಪೆನ್ (1621-1670). ತಾಯಿ ಮಾರ್ಗರೇಟ್ ಜಾಸ್ಪರ್. ಚಿಗ್ ವಿಲ್ ಶಾಲೆಯಲ್ಲಿ ಪ್ರಾಚೀನ ಶೈಲಿಯ ವಿದ್ಯಾಭ್ಯಾಸವನ್ನು ಪಡೆದು ಪ್ಯೂರಿಟನ್ ಪ್ರಭಾವಗಳಿಗೊಳಗಾದ ಈತ 1660ರಲ್ಲಿ ಆಕ್ಸ್‍ಫರ್ಡ್ ಸೇರಿದ. ಅಲ್ಲಿ ಈತನ ಧಾರ್ಮಿಕ ಅನಂಗೀಕಾರದ ವರ್ತನೆಗಾಗಿ ಈತನನ್ನು ಕೆಳಹಂತಕ್ಕಿಳಿಸಲಾಯಿತು. ಮುಂದೆ ಈತ ಇಂಗ್ಲಿಷ್ ವಿಶ್ವವಿದ್ಯಾಲಯಗಳನ್ನು ಸೋಮಾರಿತನ, ಸಡಿಲತೆ, ದುಂದುಗಾರಿಕೆ, ಸ್ವಚ್ಛಂದತೆ ಮತ್ತು ದಟ್ಟ ಅಜ್ಞಾನದ ಆದರ್ಶ ಬೀಡುಗಳು ಎಂದು ಅಳಿದ. ಕೊಂಚಕಾಲ ಯೂರೋಪ್ ಖಂಡದ ಪ್ರವಾಸ ಮಾಡಿದ. ಆಗ ಸುಮಾರು ಎರಡು ವರ್ಷ ಫ್ರಾನ್ಸಿನ ಸೌಮುರ್‍ನಲ್ಲಿರುವ ಪ್ರಾಟೆಸ್ಟೆಂಟ್ ವಿಶ್ವವಿದ್ಯಾಲಯದಲ್ಲಿ ಕಳೆದ. ಅನಂತರ ಇಂಗ್ಲೆಂಡಿಗೆ ಹಿಂತಿರುಗಿ, ಕೊಂಚ ಕಾಲ ಲಿಂಕನ್ಸ್ ಇನ್‍ನಲ್ಲಿ ನ್ಯಾಯಶಾಸ್ತ್ರದ ಅಭ್ಯಾಸ ಮಾಡಿದ. ಇದಿಷ್ಟೇ ಈತ ಪಡೆದ ಕ್ರಮಬದ್ಧ. ಔಪಚಾರಿಕ ವಿದ್ಯಾಭ್ಯಾಸ. ಆದರೆ, ಇದು ಮುಂದೆ ಈತನಿಗೆ ತನ್ನ ಬರವಣಿಗೆ ಮತ್ತು ಇಂಗ್ಲಿಷ್ ನ್ಯಾಯಾಲಯಗಳನ್ನು ಎದುರಿಸುವಲ್ಲಿ ನೆರವಿಗೆ ಬಂತು.

ಈತನ ತಂದೆ ಈತನನ್ನು ಕುಟುಂಬದ ಆಸ್ತಿಪಾಸ್ತಿಯ ಉಸ್ತುವಾರಿ ನೋಡಿಕೊಳ್ಳಲು 1666ರಲ್ಲಿ ಐರ್ಲೆಂಡಿಗೆ ಕಳಿಸಿದ. ಅಲ್ಲಿ ಈತ ಆಗಿನ ಸಮಾಜದ ದ್ವೇಷಾಕ್ರೋಶಗಳಿಗೆ ಈಡಾಗಿದ್ದ ಕ್ವೇಕರ್ ಪಂಥಕ್ಕೆ ಸೇರಿಕೊಂಡ. 

ಫ್ರೆಂಡ್ಸ್ ಚರ್ಚ್ ಎಂಬ ಹೆಸರಿನ ಧಾರ್ಮಿಕ ಸಂಘದ ಸದಸ್ಯರನ್ನು ಕ್ವೇಕರ್ಸ್ ಎಂದು ಕರೆಯುತ್ತಾರೆ. ಈ ಪಂಥ 17ನೆಯ ಶತಮಾನದ ಆದಿಯಲ್ಲಿ ಇಂಗ್ಲೆಂಡಿನಲ್ಲಿ ಜಾರ್ಜ್‍ಫಾಕ್ಸ್ ಎಂಬುವನಿಂದ ಸ್ಥಾಪಿತವಾಯಿತು. ಭ್ರಷ್ಟಪಾದ್ರಿಗಳಿಂದ ಅವನತಿಗೀಡಾಗಿದ್ದ ಅಂದಿನ ಕ್ಯಾತೊಲಿಕ್ ಚರ್ಚಿನ ವಿರುದ್ಧ ಈ ಪಂಥ ಜನ್ಮ ತಾಳಿತು. ನಿಜವಾದ ಧಾರ್ಮಿಕ ಶ್ರದ್ಧೆ ಮತ್ತು ದೈವಭಕ್ತಿ ಉಳ್ಳವರೆಲ್ಲ ಪಾದ್ರಿಗಳೇ! ಗಂಡಿನಂತೆ ಹೆಣ್ಣಿಗೂ ಚರ್ಚಿನ ಆಡಳಿತದ ನಿರ್ವಹಣೆಯಲ್ಲಿ ಮತ್ತು ಪೂಜಾ ವಿಧಿಗಳಲ್ಲಿ ಸಮಪಾಲಿರಬೇಕು. ಭಕ್ತಾದಿಗಳಿಂದ ವಂತಿಗೆ, ತಪ್ಪಿಗೆ ದಂಡ ಇತ್ಯಾದಿ ವಸೂಲಿ ಮಾಡಕೂಡದು. ಚರ್ಚಿಗೆ ಪ್ರತ್ಯೇಕ ಪಾದ್ರಿಗಳಿರಬೇಕಿಲ್ಲ. ಇವು ಈ ಪಂಥೀಯರ ನಂಬಿಕೆಗಳಲ್ಲಿ ಕೆಲವು.

ಪೆನ್ ತನ್ನ 13ನೆಯ ವಯಸ್ಸಿನಲ್ಲೇ ಕ್ವೇಕರ್ ಪಂಥದ ಪ್ರಭಾವಕ್ಕೊಳಗಾಗಲು ಮುಖ್ಯ ಕಾರಣ ಥಾಮಸ್ ಲೋ ಎಂಬ ಆಕ್ಸ್‍ಫರ್ಡಿನ ಸಂಚಾರಿಪಾದ್ರಿ. 1667ರಲ್ಲಿ ಕಾರ್ಕ್‍ನಲ್ಲಿ ನಡೆದ ಕ್ವೇಕರ್ ಸಭೆಯೊಂದರಲ್ಲಿ ಭಾಗವಹಿಸಿದ್ದಕ್ಕಾಗಿ, ಅಂದಿನ ಕಾನೂನಿನಂತೆ ಪೆನ್ ಕಾರಾಗೃಹವಾಸ ಅನುಭವಿಸಬೇಕಾಯಿತು. ಆದರೆ, ಅನತಿ ಕಾಲದಲ್ಲೇ ಈತ ಐರ್ಲೆಂಡಿನ ಸಂಬಂಧಪಟ್ಟ ನ್ಯಾಯಾಧಿಕಾರಿಗೆ ಧಾರ್ಮಿಕ ಸ್ವಾತಂತ್ರ್ಯದಲ್ಲಿ ತನಗಿದ್ದ ಅಚಲ ನಂಬಿಕೆಯ ಬಗ್ಗೆ ಪತ್ರ ಬರೆದಿದ್ದ. ಈತನ ಈ ಹೊಸ ಧಾರ್ಮಿಕ ಪಂಥದಿಂದ ಕೃದ್ಧನಾದ ಈತನ ತಂದೆ ಈತನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಹೆದರಿಸಿದ. ಆದರೆ, ಯುವಕ ಪೆನ್ ವಿಚಲಿತನಾಗಲಿಲ್ಲ ಮತ್ತು ಬಹುಬೇಗ ಇನ್ನರ್ ಲೈಟ್ ಎಂಬ ಮತದ ಸಮರ್ಥ ಸಂರಕ್ಷಕನಾಗಿ ಬೆಳಕಿಗೆ ಬಂದ.
ರೋಮನ್ ಕ್ಯಾತೊಲಿಕ್ಕರನ್ನು ಆಂಗ್ಲಿಕರನ್ನು ಮತ್ತು ಇತರೆ ಭಿನ್ನಮತೀಯರನ್ನು ಖಂಡಿಸಿ, 1668ರಲ್ಲಿ ಪೆನ್ ಟ್ರೂತ್ ಎಕ್ಸಾಲ್ಟೆಡ್ ಎಂಬ ಕರಪತ್ರವನ್ನು ಬರೆದ. ಅನಂತರ, ತನ್ನ ಒಟ್ಟಾರೆ ಸಾಹಿತ್ಯಿಕ ಜೀವನದಲ್ಲಿ ಪೆನ್ ಕರಪತ್ರಗಳು ಮತ್ತು ದೀರ್ಘ ಪುಸ್ತಕಗಳನ್ನೊಳಗೊಂಡಂತೆ ಒಂದು ನೂರಕ್ಕೂ ಹೆಚ್ಚು ಕೃತಿಗಳನ್ನುರಚಿಸಿದ. 1668ರಲ್ಲಿ ದಿ ಸ್ಯಾಂಡಿ ಫೌಂಡೇಶನ್ ಷೇಕನ್ ಎಂಬ ಕೃತಿರಚಿಸಿ, ಅಂದು ಪ್ರಚಲಿತವಾಗಿದ್ದ ಮತ್ತು ಸರ್ವಸಮ್ಮತವಾಗಿದ್ದ ರೀತಿಯ ಕ್ರಿಸ್ತನ ತ್ರಿಮೂರ್ತಿ ಕಲ್ಪನೆಯನ್ನು ಪ್ರಶ್ನಿಸಿದ. 1669ರಲ್ಲಿ ಇನ್ನೊಸೆನ್ಸಿ ವಿತ್ ಹರ್ ಓಪನ್ ಫೇಸ್ ಎಂಬ ಕೃತಿಯಲ್ಲಿ ತನ್ನ ಸಂಪ್ರದಾಯ ವಿರೋಧಿ ನಿಲವನ್ನು ಪೆನ್ ಸಮರ್ಥಿಸಿಕೊಂಡನಾದರೂ, ಈತನನ್ನು ಲಂಡನ್ನಿನ ಕಾರಾಗೃಹದಲ್ಲಿ ಬಂಧನದಲ್ಲಿಡಲಾಯಿತು. ಅಲ್ಲಿ ಪೆನ್ ತನ್ನ ಅತ್ಯಂತ ಪ್ರಖ್ಯಾತ ಪುಸ್ತಕವಾದ ನೊಕ್ರಾಸ್, ನೊಕ್ರೌನ್ ಬರೆದ. ಇದರಲ್ಲಿ ಈತ ತನ್ನ ಪಾಂಡಿತ್ಯಪೂರ್ಣ, ಸುಲಲಿತ ಹಾಗೂ ಅಲ್ಲಲ್ಲಿ ಹಾಸ್ಯರಸಲೇಪಿತ ಶೈಲಿಯಲ್ಲಿ ಕ್ವೇಕರ್ ಪ್ಯೂರಿಟನ್ ನೀತಿಯನ್ನು ಪ್ರತಿಪಾದಿಸಿದ.

ಕಾರಾಗೃಹವಾಸದ ಸಮಯದಲ್ಲಿರಚಿತವಾದ ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತ್ಯ ಕೃತಿಗಳಲ್ಲಿ ಪೆನ್ನನ ನೊಕ್ರಾಸ್, ನೊಕ್ರೌನ್ ಸಹ ಒಂದೆಂದು ಪರಿಗಣಿತವಾಗಿದೆ.

ಪೆನ್ನನ ತಾತ್ತ್ವಿಕ ಮತ್ತು ಧಾರ್ಮಿಕ ಕೃತಿಗಳು ಚಿರಕಾಲ ಬಾಳಬಲ್ಲ ಅಂತಃಸತ್ವದಿಂದ ಕೂಡಿವೆಯಾದರೂ ಈತನಿಗೆ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಿರುವುದು ಈತ ತನ್ನ ನಡೆನುಡಿಗಳ ಮೂಲಕ ಧರ್ಮಸಹಿಷ್ಣುತೆಗಾಗಿ ನಡೆಸಿದ ನಿರಂತರ ಹೋರಾಟ. 1670ರಲ್ಲಿ ಪೆನ್ ಬರೆದ ದಿ ಗ್ರೇಟ್ ಕೇಸ್ ಆಫ್ ಲಿಬರ್ಟಿ ಆಫ್ ಕಾನ್ಸೆಯನ್ಸ್ ಎಂಬ ಕೃತಿ ಇಂಗ್ಲೆಂಡಿನ ರಾಜಪ್ರಭುತ್ವದ ಪುನರ್ ಸ್ಥಾಪನೆಯ ಅವಧಿಯಲ್ಲಿರಚಿತವಾದ ಧರ್ಮ ಸಹಿಷ್ಣುತೆಯ ಅತ್ಯಂತ ಸುಸಂಬದ್ಧ ಮತ್ತು ಪರಿಪೂರ್ಣವಾದ ಪ್ರತಿಪಾದನೆಯಾಗಿದೆ. ಅದೇ ವರ್ಷ ಇಂಗ್ಲೀಷರ ಪರಂಪರಾಗತ ಧಾರ್ಮಿಕ ಮತ್ತು ಅಭಿಪ್ರಾಯ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪೆನ್ನನಿಗೆ ಮತ್ತೊಂದು ಸದವಕಾಶ ದೊರೆಯಿತು. 1679ರ ಆಗಸ್ಟ್ 14ರಂದು ಲಂಡನ್ನಿನ ಗ್ರೇಸ್‍ಚರ್ಚ್ ಬೀದಿಯಲ್ಲಿದ್ದ ಕ್ವೇಕರ್ ಸಭಾ ಭವನಕ್ಕೆ ಸರ್ಕಾರಿ ಅಧಿಕಾರಿಗಳು ಬೀಗಮುದ್ರೆ ಹಾಕಿದರು. ಆಗ ಪೆನ್ ಬೀದಿಯಲ್ಲೇ ನೂರಾರು ಜನರಿಗೆ ಧರ್ಮಬೋಧೆ ಮಾಡಿದ. ಸಭೆ ಮುಗಿದ ಅನಂತರ ಪೆನ್ ಮತ್ತು ವಿಲಿಯಮ್ ಮೀಡ್‍ರನ್ನು ಶಾಂತಿ ಭಂಗದ ಆಪಾದನೆಯ ಮೇಲೆ ಬಂಧಿಸಿ, ಕಾರಾಗೃಹದಲ್ಲಿಡಲಾಯಿತು. ಆದರೆ ಪೆನ್ ಧೃತಿಗೆಡದೆ ತನ್ನಲ್ಲಿದ್ದ ಆತ್ಮಸ್ಥೈರ್ಯ, ಧರ್ಮಶ್ರದ್ಧೆ ಮತ್ತು ವಾದ ಕೌಶಲ್ಯಗಳಿಂದ, ತಮ್ಮ ವಿರುದ್ಧ ಹೂಡಲಾಗಿದ್ದ ದಾವೆ ಅಕ್ರಮವೆಂದು ನಿರೂಪಿಸಿದ. ಎಡ್ವರ್ಡ್ ಬುಷೆಲ್ಲನ ನೇತೃತ್ವದಲ್ಲಿ ನ್ಯಾಯದರ್ಶಿಗಳು ದಿಟ್ಟತನದಿಂದ ಮೇಯರ್ ಹಾಗೂ ಮ್ಯಾಜಿಸ್ಟ್ರೇಟಿನ ಬೆದರಿಕೆ ಮತ್ತು ದಬ್ಬಾಳಿಕೆಗಳನ್ನು ಪ್ರತಿಭಟಿಸಿದರು. ನ್ಯಾಯಪೀಠಕ್ಕೆ ಅವಿಧೇಯರಾಗಿ ವರ್ತಿಸಿದ್ದಕ್ಕಾಗಿ, ನ್ಯಾಯದರ್ಶಿಗಳಿಗೆ ದಂಡ ಮತ್ತು ಸೆರೆಮನೆವಾಸ ವಿಧಿಸಲಾಯಿತು. ಆದರೆ ಅಂದಿನ ಮುಖ್ಯನ್ಯಾಯಾಧೀಶನಾಗಿದ್ದ ಸರ್ ಜಾನ್‍ವಾನ್ ನ್ಯಾಯದರ್ಶಿ ಮಂಡಳಿಯ ಅಭಿಪ್ರಾಯ ಸ್ವಾತಂತ್ರ್ಯವನ್ನು ಸಮರ್ಥಿಸಿ ಅವರನ್ನೆಲ್ಲ ಬಿಡುಗಡೆ ಮಾಡಿದ. ಆತ ತನ್ನ ತೀರ್ಪಿನಲ್ಲಿ ಹೀಗೆ ನುಡಿದ: ಒಬ್ಬ ನ್ಯಾಯಾಧೀಶ ನ್ಯಾಯದರ್ಶಿಗಳಿಗೆ ನಿಜ ತಿಳಿಸಿ, ಅವರ ಕಣ್ತೆರೆಸಲು ಪ್ರಯತ್ನಿಸಬಹುದೇ ವಿನಾ ತನ್ನ ಅಭಿಪ್ರಾಯವನ್ನು ಅವರ ಮೇಲೆ ಹೇರಕೂಡದು. ನ್ಯಾಯದರ್ಶಿಮಂಡಳಿಯ ಸ್ವಾತಂತ್ರ್ಯವನ್ನು ಸ್ಥಾಪಿಸಿದ ಈ ಮೊಕದ್ದಮೆ ಇಂಗ್ಲಿಷ್ ನ್ಯಾಯಶಾಸ್ತ್ರದಲ್ಲಿ ಬುಷೆಲ್ ಮೊಕದ್ದಮೆ ಎಂದು ಪ್ರಖ್ಯಾತವಾಗಿದೆ. 
1670ರಲ್ಲಿ ತನ್ನ ತಂದೆಯ ಮರಣಾನಂತರ ಪೆನ್ ಇಂಗ್ಲೆಂಡ್ ಮತ್ತು ಐರ್ಲೆಂಡ್‍ಗಳಲ್ಲಿದ್ದ ಪಿತ್ರಾರ್ಜಿತ ಆಸ್ತಿಗಳಿಗೆಲ್ಲ ಒಡೆಯನಾದ ಮತ್ತು ತನ್ನ ತಂದೆಯಂತೆ ರಾಜಾಸ್ಥಾನಕ್ಕೆ ಸಮೀಪವರ್ತಿಯಾದ. ಒಬ್ಬ ಕ್ವೇಕರ್‍ಗೆ ಅಸಾಮಾನ್ಯವಾಗಿದ್ದ, ಎರಡನೆಯ ಚಾಲ್ರ್ಸ್ ಮತ್ತು ಅವನ ಸೋದರ ಜೇಮ್ಸ್‍ರ ರಾಜಸ್ನೇಹ ಈತನಿಗೆ ದೊರೆಯಿತು. 1672ರಲ್ಲಿ ಪ್ರಸಿದ್ಧ ಕ್ವೇಕರನ ಮಲಮಗಳಾದ ಗುಲಿಲ್ಮಾ ಸ್ಟಿಂಗೆಟ್ಟ್ ಎಂಬುವಳನ್ನು ಪೆನ್ ಮದುವೆಯಾದ. ಈ ಮದುವೆಯಿಂದ ಈತನಿಗೆ ಎಂಟು ಮಕ್ಕಳಾದವು. ಅವುಗಳಲ್ಲಿ ನಾಲ್ಕು ಬಾಲ್ಯದಲ್ಲೇ ತೀರಿಕೊಂಡವು. 

1670ರ ದಶಕದಲ್ಲಿ ಪೆನ್ ಸುಮಾರು 40 ವಿವಾದಾತ್ಮಕ ಕಿರುಹೊತ್ತಿಗೆಗಳನ್ನು ಬರೆದು ಕ್ವೇಕರ್ ಪಂಥದ ಸಮರ್ಥನೆ ಮಾಡಿದ. 1671 ಮತ್ತು 1677ರಲ್ಲಿ ಹಾಲೆಂಡ್ ಮತ್ತು ಉತ್ತರ ಜರ್ಮನಿಯಲ್ಲಿ ಧರ್ಮೋಪದೇಶದ ಪ್ರವಾಸ ಕೈಗೊಂಡು, ಹಲವಾರು ಮಿತ್ರರನ್ನು ಗಳಿಸಿಕೊಂಡ. ಮುಂದೆ ಪೆನ್ಸಿಲ್‍ವೇನಿಯಾಕ್ಕೆ ವಲಸಿಗರನ್ನು ಒದಗಿಸುವುದರಲ್ಲಿ ಇದು ಈತನಿಗೆ ನೆರವಾಯಿತು. ಆ ದಶಕದ ಕೊನೆಯ ವರ್ಷಗಳಲ್ಲಿ ಪೆನ್ ರಾಜಕೀಯ ಚಟುವಟಿಕೆಗಳಲ್ಲಿ ನಿರತನಾಗಿದ್ದ. ತನ್ನ ಮಿತ್ರನೊಬ್ಬನ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿ, ಇಂಥ ಚಟುವಟಿಕೆಗಳು ತಮಗೆ ತಕ್ಕದ್ದಲ್ಲವೆಂದು ಪರಿಗಣಿಸಿದ್ದ ಹಲವಾರು ಕ್ವೇಕರ್‍ಗಳ ಅಸಮಾಧಾನಕ್ಕೆ ಪಾತ್ರನಾದ. ಆ ಅವಧಿಯಲ್ಲಿ ಈತನು ರ್ಯಾಂಡಿಕಲ್ ವ್ಹಿಗ್ಸ್ ಪಕ್ಷದ ಪರವಾಗಿ ಬರೆದ ಚುನಾವಣಾ ಕರಪತ್ರ ಇಂಗ್ಲೆಂಡ್ಸ್ ಗ್ರೇಟ್ ಇಂಟ್ರೆಸ್ಟ್ ಇನ್ ದಿ ಚಾಯಿಸ್ ಆಫ್ ದಿಸ್ ನ್ಯೂ ಪಾರ್ಲಿಮೆಂಟ್ ಗಮನೀಯವಾಗಿದೆ. ಏಕೆಂದರೆ, ಇದು ಇಂಗ್ಲಿಷ್ ಮತದಾರರ ಎದುರು ಇಡಲ್ಪಟ್ಟ ಮೊಟ್ಟಮೊದಲನೆಯ ಹಾಗೂ ಸುಸ್ಪಷ್ಟವಾದ ಪಕ್ಷದ ಸಿದ್ಧಾಂತವಾಗಿತ್ತು.

ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದಕ್ಕೆ ಮುಂಚಿನಿಂದಲೇ ಪೆನ್ ಅಮೆರಿಕದ ವಸಾಹತುಗಳೊಂದಿಗೆ ಸಂಬಂಧವಿಟ್ಟುಕೊಂಡಿದ್ದ. ಪಶ್ಚಿಮ ನ್ಯೂ ಜರ್ಸಿಯ ಕ್ವೇಕರ್ ಮಾಲೀಕರಲ್ಲೊಬ್ಬನಾದ ಎಡ್ವರ್ಡ್ ಬೆಲೆಂಜನಿಗೆ ಪೆನ್ ನ್ಯಾಸ ನಿರ್ಮಾಪಕನಾಗಿದ್ದ (ಟ್ರಸ್ಟಿ). 1681ರಲ್ಲಿ ಪೆನ್ ಮತ್ತು ಹನ್ನೊಂದು ಮಂದಿ ಇತರೆ ಕ್ವೇಕರ್‍ಗಳು ಕೂಡಿ, ಸರ್‍ಜಾನ್ ಕಾರ್ಟ್‍ರೆಟ್ಟರ ವಿಧವೆಯಿಂದು ಪೂರ್ವ ನ್ಯೂ ಜರ್ಸಿಗೆ ಒಡೆತನದ ಹಕ್ಕುಗಳನ್ನು ಹಾಗೂ ಸ್ವಾಯತ್ತತೆಯನ್ನು ಗಳಿಸಿಕೊಟ್ಟರು. ಅದೇ ವರ್ಷ ಇಂಗ್ಲೆಂಡಿನ ರಾಜಕೀಯದಲ್ಲಿ ಹಲವು ಅನಪೇಕ್ಷಿತ ತಿರುವುಗಳುಂಟಾದವು. ಸಂಸತ್ತಿಲ್ಲದೆ ಎರಡನೆಯ ಚಾಲ್ರ್ಸ್ ರಾಜ್ಯಾಡಳಿತ ನಡೆಸುತ್ತಿದ್ದ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಭವಿಷ್ಯ ಮಸುಕಾಗಿತ್ತು. ಆದ್ದರಿಂದ ಪೆನ್ ಡೆಲಾವೇರ್ ನದಿಯ ಪಶ್ಚಿಮ ದಡದಲ್ಲಿದ್ದ ಪ್ರಾಂತ್ಯವನ್ನು ಚಾಲ್ರ್ಸ್‍ನಿಂದ ಬೇಡಿ ಪಡೆದುಕೊಂಡ. ಅದಕ್ಕೆ ತನ್ನ ತಂದೆಯ ನೆನಪಾಗಿ ಪೆನ್‍ಸಿಲ್ವೇನಿಯಾ ಎಂದು ಹೆಸರಿಟ್ಟ. (ಪೆನ್ನನ ತಂದೆಗೆ ಚಾಲ್ರ್ಸ್ ಭಾರಿ ಮೊತ್ತದ ಸಾಲ ಬಾಕಿ ಇದ್ದ ಮತ್ತು ಈ ರೀತಿ ಆ ಋಣದಿಂದ ಮುಕ್ತನಾದ). ಕೆಲವು ತಿಂಗಳ ಅನಂತರ ಯಾರ್ಕಿನ ದೊರೆ ಪೆನ್ನನಿಗೆ ಮೂರು ತಗ್ಗು ಪ್ರದೇಶದ ಪ್ರಾಂತ್ಯಗಳನ್ನು ಬಳುವಳಿಯಾಗಿ ಕೊಟ್ಟ. ಇದೇ ಮುಂದೆ ಡೆಲಾವೇರ್ ಎನಿಸಿಕೊಂಡವು. ಇಂಗ್ಲೆಂಡಿನಲ್ಲಿ ಕಿರುಕುಳಕ್ಕೀಡಾಗಿದ್ದ ಕ್ವೇಕರ್‍ಗಳಿಗೆ ಮತ್ತಿತರರಿಗೆ ಪೆನ್‍ಸಿಲ್ವೇನಿಯಾ ಆಶ್ರಯಧಾಮವಾಗುವಂತೆ ಮತ್ತು ಒಂದು ಆದರ್ಶ ಕ್ರೈಸ್ತ ಪ್ರಜಾಪ್ರಭುತ್ವವಾಗುವಂತೆ ಮಾಡಬೇಕೆಂದೂ ಪೆನ್ ಆಶಿಸಿದ.

ತನ್ನ ಕ್ವೇಕರ್-ವ್ಹಿಗ್ ವಿಚಾರಗಳಿಗೆ ಅನುಗುಣವಾಗಿ ಪೆನ್‍ಸಿಲ್ವೇನಿಯಾ ಸರ್ಕಾರವನ್ನು ಪೆನ್‍ರೂಪಿಸಿದ. ಜನತೆಗೆ ಕೇಡುಂಟುಮಾಡಬಲ್ಲ ಯಾವ ಅಧಿಕಾರವನ್ನೂ ಈತ ತನಗಾಗಲೀ ತನ್ನ ಮುಂದಿನ ಸಂತತಿಗಾಗಲೀ ಉಳಿಸಿಕೊಳ್ಳಲಿಲ್ಲ. ಒಬ್ಬನ ಇಚ್ಛೆ ಇಡೀ ದೇಶದ ಒಳಿತಿಗೆ ಅಡಚಣೆಯಾಗಬಾರದೆಂದು ಈತ ಬಯಸಿದ. ಇಂಗ್ಲಿಷರ ಎಲ್ಲ ಧಾರ್ಮಿಕ ಮತ್ತು ಪರಂಪರಾಗತ ಹಕ್ಕು, ಸ್ವಾತಂತ್ರ್ಯಗಳನ್ನುರಕ್ಷಿಸಲಾಯಿತು. ಪೆನ್‍ರೂಪಿಸಿದ ಸರ್ಕಾರಿ ಯಂತ್ರದಲ್ಲಿ ಲೋಪದೋಷಗಳಿದ್ದುವಾದರೂ ಬುದ್ಧಿವಂತಿಕೆಯಿಂದ ಸಂವಿಧಾನದಲ್ಲಿ ಅವಶ್ಯಕತೆ ಕಂಡಾಗ ತಿದ್ದುಪಡಿ ಮಾಡುವ ಅವಕಾಶವನ್ನು ಕಲ್ಪಿಸಿದ್ದ. ಒಂದು ಲಿಖಿತ ಸಂವಿಧಾನದಲ್ಲಿ ಇಂಥ ಅವಕಾಶವಿದ್ದುದು ಅದೇ ಮೊದಲು. 

1682ರ ಕೊನೆಯಲ್ಲಿ ಪೆನ್ ಸ್ವತಃ ವೆಲ್‍ಕಮ್ ಎಂಬ ಹಡಗಿನಲ್ಲಿ ಪೆನ್‍ಸಿಲ್ವೇನಿಯಾಗೆ ಯಾನ ಮಾಡಿ, ಅಲ್ಲಿ ತನ್ನ "ಪವಿತ್ರ ಪ್ರಯೋಗ" ಯಶಸ್ವಿಯಾಗಿ ಕೈಗೂಡುತ್ತಿರುವುದನ್ನು ಕಂಡ. ಫಿಲಡೆಲ್ಫಿಯಾ ನಗರ ನಿರ್ಮಾಣಗೊಳ್ಳುತ್ತಿತ್ತು ಮತ್ತು ಫಲವತ್ತಾದ ಆ ಪ್ರಾಂತ್ಯಕ್ಕೆ ವಲಸಿಗರ ಪ್ರವಾಹ ಹರಿದುಬರುತ್ತಿತ್ತು. ಪೆನ್ ಪ್ರಥಮ ಶಾಸನ ಸಭೆಯ ಅಧ್ಯಕ್ಷತೆ ವಹಿಸಿದ. ತಗ್ಗು ಪ್ರದೇಶಗಳ ಪೆನ್‍ಸಿಲ್ವೇನಿಯಾದ ಕಾನೂನುಗಳಲ್ಲಿ ಒಮ್ಮತವಿರುವುದನ್ನು ಮತ್ತು ಅವು ಮಾತೃಭೂಮಿಯಾದ ಇಂಗ್ಲೆಂಡಿನ ಶಾಸನಗಳನ್ನೇ ಅನುಕರಿಸುತ್ತಿರುವುದನ್ನು ಪೆನ್ ಕಂಡುಕೊಂಡ. ಸ್ಥಳೀಯ ಮೂಲನಿವಾಸಿಗಳೊಂದಿಗೂ ಈತ ಸಂಧಾನಗಳನ್ನು ನಡೆಸಿ, ಉತ್ತಮ ಸಂಬಂಧ ಏರ್ಪಡುವಂತೆ ಮಾಡಿದ. ಪಕ್ಕದ ಮೇರಿಲ್ಯಾಂಡ್ ಪ್ರಾಂತ್ಯದ ಮಾಲೀಕನಾದ ಲಾರ್ಡ್ ಬಾಲ್ಟಿಮೋರ್‍ನೊಂದಿಗೆ ಸಮಾಲೋಚಿಸಿ, ಗಡಿಗಳ ಬಗ್ಗೆ ಒಂದು ಒಪ್ಪಂದಕ್ಕೆ ಬರಲು ಯತ್ನಿಸಿ ಪೆನ್ ವಿಫಲನಾದ. ಸುಮಾರು 50 ವರ್ಷ ಕಾಲ ಈ ಗಡಿವಿವಾದ ಒಂದು ಸಮಸ್ಯೆಯಾಗಿಯೇ ಮುಂದುವರಿಯಿತು. ತನ್ನ ವಸಾಹತಿನಲ್ಲಿ ಕೇವಲ ಎರಡು ವರ್ಷಗಳಿದ್ದ ಅನಂತರ, 1684ರಲ್ಲಿ ಬಾಲ್ಟಿಮೋರನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಪೆನ್ ಇಂಗ್ಲೆಂಡಿಗೆ ಹಿಂತಿರುಗಬೇಕಾಯಿತು.
ಪೆನ್ನನ ಮಿತ್ರನಾಗಿದ್ದ ಯಾರ್ಕಿನ ದೊರೆ ಎರಡನೆಯ ಜೇಮ್ಸ್ ಇಂಗ್ಲೆಂಡಿನ ಗದ್ದುಗೆ ಏರಿದ ಮೇಲೆ, ರಾಜಸ್ಥಾನದಲ್ಲಿ ಪೆನ್ನನ ಪ್ರಭಾವ ಹೆಚ್ಚಿತು. ಈತ ಸೆರೆಮನೆಯಲ್ಲಿದ್ದ ನೂರಾರು ಕ್ವೇಕರ್‍ಗಳನ್ನು ಮತ್ತು ಜಾನ್ ಲಾಕ್‍ನಂಥ ರಾಜಕೀಯ ಸೆರೆಯಾಳುಗಳನ್ನು ಬಿಡುಗಡೆಮಾಡಿಸಿದ. 1687ರಲ್ಲಿ ಜೇಮ್ಸ್ ಧಾರ್ಮಿಕ ಸ್ವಾತಂತ್ರ್ಯವನ್ನು ಪೋಷಿಸಿದಾಗ, ಪೆನ್ ಅದನ್ನು ಸ್ವಾಗತಿಸಿದ. ಆದರೆ, ಈ ಸ್ವಾತಂತ್ರ್ಯ ಇನ್ನೂ ರಾಜನ ಹಿಡಿತದಿಂದ ಪೂರ್ಣ ಪಾರಾಗದೆ, ಅವನ ಇಷ್ಟಾವಲಂಬಿಯಾಗಿದ್ದುದರಿಂದ ಮತ್ತು ಮೂಲಭೂತ ಹಕ್ಕಾಗಿ ಪ್ರಜೆಗಳಿಗೆ ನೀಡಲ್ಪಡದಿದ್ದುದರಿಂದ ಪೆನ್ ತನ್ನ ನಡವಳಿಕೆಗಾಗಿ ಟೀಕೆಗೆ ಗುರಿಯಾಗಬೇಕಾಯಿತು. ಆದರೆ, 1689ರಲ್ಲಿ ಜೇಮ್ಸ್ ಪದಚ್ಯುತನಾದ ಅನಂತರ ಘೋಷಿಸಲಾದ ಧರ್ಮಸಹಿಷ್ಣುತೆಯ ಶಾಸನ ಯಾವುದಕ್ಕಾಗಿ ಪೆನ್ ಸುದೀರ್ಘಕಾಲ ಪ್ರಾಮಾಣಿಕವಾಗಿ ಹಾರಾಡಿದ್ದನೋ ಆ ತತ್ತ್ವವನ್ನು ಅಂತಿಮವಾಗಿ ಸ್ಥಾಪಿಸಿ ಆಚರಣೆಗೆ ತಂದಿತು.

ವಿಲಿಯಮ್ ಮತ್ತು ಮೇರಿ ಅಧಿಕಾರಕ್ಕೆ ಬಂದನಂತರ, ಜೇಮ್ಸ್‍ನ ಆಪ್ತರಲ್ಲೊಬ್ಬ ಈತನಾಗಿದ್ದುದರಿಂದ ಅವರ ಅವಕೃಪೆಗೆ ಪಾತ್ರನಾಗಬೇಕಾಯಿತು. 1693 ರಿಂದ 94ರ ವರೆಗೆ ತಾತ್ಕಾಲಿಕವಾಗಿ ಪೆನ್ನನ ವಸಾಹತನ್ನು ಈತನಿಂದ ಕಸಿದುಕೊಳ್ಳಲಾಯಿತು. ಬಂಧನದಿಂದ ತಪ್ಪಿಸಿಕೊಳ್ಳಲು ಕೊಂಚ ಕಾಲ ಈತ ಅಜ್ಞಾತವಾಸ ಮಾಡಬೇಕಾಯಿತು. ಈ ಅವಧಿಯಲ್ಲಿ ಈತ ಕೆಲವು ಅತ್ಯಂತ ವಿಚಾರಪೂರ್ಣ ಕೃತಿಗಳನ್ನುರಚಿಸಿದ. ಅವುಗಳಲ್ಲಿ ಎನ್ ಎಸ್ಸೆ ಟುವಡ್ರ್ಸ್ ದಿ ಪ್ರಸೆಂಟ್ ಅಂಡ್ ಫ್ಯೂಚರ್ ಯೂರೋಪ್ (1693). ಸಮ್ ಫ್ರೂಟ್ಸ್ಸ್ ಆಫ್ ಸಾಲಿಟ್ಯೂಡ್ (1693). ದಿ ರೈಸ್ ಅಂಡ್ ಪ್ರೋಗ್ರೆಸ್ ಆಫ್ ದಿ ಪೀಪಲ್ ಕಾಲ್ಡ್ ಕ್ವೇಕರ್ಸ್ (1694). ಇವು ಮುಖ್ಯವಾದವು.

ಮೊದಲ ಪತ್ನಿಯ ಮರಣಾನಂತರ, 1696ರಲ್ಲಿ ಪೆನ್ ಬ್ರಿಸ್ಟಾಲಿನ ಹನ್ನಾ ಕ್ಯಾಲೋಹಿಲ್‍ಳನ್ನು ವಿವಾಹವಾಗಿ, ಅವಳಿಂದ ಏಳು ಮಕ್ಕಳನ್ನು ಪಡೆದ. ಅವರಲ್ಲಿ ಐವರು ಮಾತ್ರ ಬದುಕುಳಿದರು. ಈ ನಡುವೆ ಪೆನ್‍ಸಿಲ್ವೇನಿಯಾ ವ್ಯವಹಾರಗಳಲ್ಲಿ ತೊಡಕುಗಳುಂಟಾಗಿದ್ದವು. ಚುನಾಯಿತ ವಿಧಾನಸಭೆ ಪೆನ್ನನಿಂದ ನೇಮಿಸಲ್ಪಟ್ಟಿದ್ದ ವಿಧಾನ ಪರಿಷತ್ತಿನೊಂದಿಗೂ ಮತ್ತು ಉಪರಾಜ್ಯಪಾಲರೊಂದಿಗೂ ನಿರಂತರ ಜಗಳದಲ್ಲಿ ತೊಡಗಿತ್ತು. ತಗ್ಗು ಪ್ರದೇಶಗಳ ಮತ್ತು ಮುಖ್ಯ ಪ್ರಾಂತ್ಯದ ನಡುವೆ ಜವಾಬ್ದಾರಿಗಳ ಹಂಚಿಕೆಯಲ್ಲಿ ಸಾಮರಸ್ಯ ಕೊಂಡಿತಪ್ಪಿ, ವೈಮನಸ್ಯ ಹೊಗೆಯಾಡತೊಡಗಿತ್ತು. ವಸಾಹತಿನ ಸಂರಕ್ಷಣೆಗೆ ಸೈನ್ಯ ಒದಗಿಸಲು ಮತ್ತು ಅದರ ವೆಚ್ಚ ಭರಿಸಲು ಪೆನ್‍ಸಿಲ್ವೇನಿಯಾದ ಕ್ವೇಕರ್‍ಗಳು ಒಪ್ಪದಿದ್ದುದರಿಂದ ಇಂಗ್ಲೆಂಡಿನೊಂದಿಗೆ ಅದರ ಸಂಬಂಧ ಕೆಟ್ಟಿತ್ತು. ತನ್ನ ವಸಾಹತಿನ ನಿವಾಸಿಗಳಿಂದ ಕಂದಾಯ ವಸೂಲಿ ಮಾಡುವುದೂ ಸಹ ಪೆನ್ನನಿಗೆ ದುಸ್ಸಾಧ್ಯವಾಯಿತು. ಆದ್ದರಿಂದ 1699ರಲ್ಲಿ ಪೆನ್ ತನ್ನ ಪತ್ನಿಯೊಂದಿಗೆ ಪೆನ್‍ಸಿಲ್ವೇನಿಯಾಗೆ ಹಿಂತಿರುಗಿ ಪೆನ್ಸ್‍ಬರಿಯಲ್ಲಿ ನೆಲೆಸಿದ. ತನ್ನ ಪ್ರಾಂತ್ಯದಲ್ಲಿದ್ದ ಹಲವಾರು ವಿವಾದಗಳನ್ನು ಬಗೆಹರಿಸುವ ಪ್ರಯತ್ನವಾಗಿ, 1701ರಲ್ಲಿ ಪೆನ್ ಪುನರ್ ಪರಿಶೀಲಿತ ಸಂವಿಧಾನಗಳನ್ನು ಆಚರಣೆಗೆ ತಂದ. ಇದರಲ್ಲಿ ಶಾಸನ ಮಾಡುವ ಹಕ್ಕನ್ನು ಚುನಾಯಿತ ವಿಧಾನಸಭೆಗೆ ಮಾತ್ರ ಒಪ್ಪಿಸಲಾಯಿತು. ಈ ಪ್ರಜಾಪ್ರಭುತ್ವ ಸರ್ಕಾರ 1776ರವರೆಗೆ ಜಾರಿಯಲ್ಲಿತ್ತು. ಎರಡು ವರ್ಷಗಳೊಳಗೆ ಮತ್ತೆ ಕೆಲವು ವ್ಯವಹಾರಗಳಿಗಾಗಿ ಪೆನ್ ಇಂಗ್ಲೆಂಡಿಗೆ ಹಿಂತಿರುಗಬೇಕಾಯಿತು. ಅನಂತರ ಈತ ಮತ್ತೆ ತನ್ನ ವಸಾಹತನ್ನು ನೋಡಲಿಲ್ಲ. ಅದರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪೆನ್ ತನ್ನ ಸಮರ್ಥ ಕಾರ್ಯದರ್ಶಿ ಜೇಮ್ಸ್ ಲೋಗನ್‍ನಿಗೆ ಒಪ್ಪಿಸಿ ಹೋದ. ಮುಂದಿನ 50 ವರ್ಷ ಕಾಲ ಲೋಗನ್ ನಿಷ್ಠೆಯಿಂದ ತನ್ನ ಕರ್ತವ್ಯ ನಿರ್ವಹಿಸಿದ.

ಪೆನ್ನನ ಕೊನೆಯ ವರ್ಷಗಳು ದುಃಖಮಯವಾಗಿದ್ದವು. ಇವನ ದೊಡ್ಡ ಮಗ ವಿಲಿಯಮ್ ಜೂನಿಯರ್ ಮಂದಬುದ್ಧಿಯವನೂ ವಿಷಯ ಲಂಪಟನೂ ಆದ. ತನ್ನ ಆಸ್ತಿಪಾಸ್ತಿಯ ವಹಿವಾಟುಗಳನ್ನು ನಿರ್ವಹಿಸಲು ತಕ್ಕವರನ್ನು ಆಯ್ಕೆ ಮಾಡುವಲ್ಲಿ ಪೆನ್ ಸರಿಯಾದ ಎಚ್ಚರ ವಹಿಸಿರಲಿಲ್ಲ. ಅವರೆಲ್ಲ ಈತನನ್ನು ವಂಚಿಸಿದರು. ಹೀಗಾಗಿ ಒಂಬತ್ತು ತಿಂಗಳ ಕಾಲ ಈತ ಸಾಲಗಾರರ ಸೆರೆಮನೆಯಲ್ಲಿ ಕಳೆಯಬೇಕಾದಂಥ ಅವಮಾನಕರ ಪ್ರಸಂಗ ಒದಗಿತು. ತನ್ನ ಪವಿತ್ರ ಪ್ರಯೋಗದಲ್ಲೂ ಭ್ರಮನಿರಸನಗೊಂಡ ಪೆನ್ 1712ರಲ್ಲಿ ಪೆನ್‍ಸಿಲ್ವೇನಿಯಾವನ್ನು ರಾಜಪೀಠಕ್ಕೆ ಮಾರಿಬಿಡಲು ಮಾತುಕತೆಗೆ ಮೊದಲಿಟ್ಟ. ಆದರೆ ಅದೇ ಸಮಯಕ್ಕೆ ಈತ ಪಾಶ್ರ್ವವಾಯುವಿನ ಹೊಡೆತಕ್ಕೆ ಈಡಾಗಿ ಬುದ್ಧಿಮಾಂದ್ಯ ಉಂಟಾಯಿತು. 1718ರ ವರೆಗೆ ನಿಸ್ಸಹಾಯಕ ಸ್ಥಿತಿಯಲ್ಲಿ ಪೆನ್ ಜೀವ ಹಿಡಿದು ಬದುಕಿದ್ದ. ಆಸ್ತಿಪಾಸ್ತಿಯ ಉಸ್ತುವಾರಿಯನ್ನು ಈತನ ಹೆಂಡತಿ ನೋಡಿಕೊಳ್ಳುತ್ತಿದ್ದಳು. 1718ರ ಜೂನ್ 30ರಂದು ಪೆನ್ ಸಾವಿಗೀಡಾದ. ಇವನ ಶವಸಂಸ್ಕಾರವನ್ನು ಬಕಿಂಗ್‍ಹಾಂಷೈರಿನ ಜೋರ್ಡಾನ್‍ನಲ್ಲಿ ನೆರವೇರಿಸಲಾಯಿತು.
(ಬಿ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ